ಧುಲಿಯಾ
ಮಹಾರಾಷ್ಟ್ರ ರಾಜ್ಯದ ಒಂದು ಜಿಲ್ಲೆ. ಆ ಜಿಲ್ಲೆಯ ಆಡಳಿತ ಕೇಂದ್ರ. ಇದನ್ನು ಧುಳೆ ಎಂದೂ ಕರೆಯುವುದುಂಟು. ಧುಲಿಯಾ ನಗರ ಪಂಜ್ರಾ ನದಿಯ ತೀರದಲ್ಲಿ ಉ. ಅ. 200 58' ಮತ್ತು ಪೂ. ರೇ. 740 50' ಮೇಲೆ ಇದೆ. ಮುಂಬಯಿ - ಜಲಗಾಂವ್ ರೈಲುಮಾರ್ಗದ ಮೇಲೆ ಇರುವ ಚಾಳೀಸಗಾಂವದಿಂದ ಧುಲಯಾಕ್ಕೆ (55 ಕಿಮೀ) ರೈಲುಮಾರ್ಗವೊಂದಿದೆ. ಮುಸ್ಲಿಮರ ಆಡಳಿತ ಆರಂಭವಾದ ಕಾಲದಲ್ಲಿ ಇದು ಫರೂಕಿಗಳ ಆಳ್ವಿಕೆಗೆ ಒಳಪಟ್ಟಿತ್ತು. ಅನಂತರ ಇದು ಮೊಗಲ್ ಸಾಮ್ರಾಜ್ಯಕ್ಕೆ ಸೇರಿತು. ಆಮೇಲೆ ಮರಾಠರ ವಶವಾದ ಈ ಪಟ್ಟಣವನ್ನು ಕೊನೆಗೆ ಬ್ರಿಟಿಷರು ವಶಪಡಿಸಿಕೊಂಡರು. 20 ನೆಯ ಶತಮಾನದಲ್ಲಿ ಜವಳಿ ಕೈಗಾರಿಕೆ ಬೆಳೆದಂತೆ ಇದು ಪ್ರಾಮುಖ್ಯ ಪಡೆದು ಬೆಳೆಯತೊಡಗಿತು. ಇಲ್ಲಿ ಹತ್ತಿಯ ಮತ್ತು ಉಣ್ಣೆಯ ಬಟ್ಟೆಗಳು, ತಲೆಗೆ ಸುತ್ತುವ ಪೇಟಗಳು ಹೇರಳವಾಗಿ ಉತ್ಪಾದನೆಯಾಗುತ್ತಿವೆ. ಇದೊಂದು ಹತ್ತಿಯ ವ್ಯಾಪಾರ ಕೇಂದ್ರ ಕೂಡ. ಹತ್ತಿ ಜವಳಿ ಕೈಗಾರಿಕೆಯಲ್ಲದೆ ಇಲ್ಲಿ ಹತ್ತಿ ಹಿಂಜುವ ಕಾರ್ಖಾನೆಗಳೂ ಸಿಗರೇಟ್ ಮತ್ತು ತೈಲ ಕೈಗಾರಿಕೆಗಳೂ ಇವೆ. ಪುಣೆ ವಿಶ್ವವಿದ್ಯಾಲಯಕ್ಕೆ ಸೇರಿದ ಎರಡು ಕಾಲೇಜುಗಳಿವೆ. 

ಧುಲಿಯಾ ಜಿಲ್ಲೆ ಮಹಾರಾಷ್ಟ್ರದ ಉತ್ತರ ಗಡಿ ಭಾಗದಲ್ಲಿದೆ. ಇದರ ದಕ್ಷಿಣದಲ್ಲಿ ಮಹಾರಾಷ್ಟ್ರದ ನಾಸಿಕ ಜಿಲ್ಲೆ. ಪಶ್ಚಿಮ ಗುಜರಾತ್ ರಾಜ್ಯದ ಡಾಂಗ್ಸ್, ಸೂರತ್, ಮತ್ತು ಭಡೋಚ ಜಿಲ್ಲೆಗಳು ವಾಯುವ್ಯದಲ್ಲಿ ಬರೋಡ ಜಿಲ್ಲೆ, ಉತ್ತರದಲ್ಲಿ ಮಧ್ಯಪ್ರದೇಶದ ಝೂಬುವಾ ಮತ್ತು ಪಶ್ಚಿಮ ನಿಮಾರ್ ಜಿಲ್ಲೆಗಳು, ವಿಸ್ತೀರ್ಣ 13,150 ಚಕಿಮೀ. ಜನಸಂಖ್ಯೆ 17,08,993 (2001). 
ಧುಲಿಯಾ ಜಿಲ್ಲೆಯಲ್ಲಿ ಸಾತ್ಪುರಾ ಮತ್ತು ಸಾತ್ವಲಾ ಬೆಟ್ಟಗಳು ಹಬ್ಬಿವೆ. ಇವುಗಳ ನಡುವೆ ಫಲವತ್ತಾದ ಕಣಿವೆಗಳಲ್ಲಿ ತಾಪಿ, ಹರಿಯುತ್ತದೆ. ಇದು ಖಾಂದೇಶ್ ಪ್ರದೇಶದ ಒಂದು ಭಾಗ. ಇಲ್ಲಿಯ ಉಷ್ಣತೆ ಜನವರಿ ಡಿಸೆಂಬರ್ ತಿಂಗಳುಗಳಲ್ಲಿ (ಕನಿಷ್ಠ 520 ಈ) ಮೇ ತಿಂಗಳಲ್ಲಿ ಗರಿಷ್ಠ (1100ಈ). ಬೇಸಗೆಯಲ್ಲಿ ಬಿಸಿಗಾಳಿ ಬೀಸುತ್ತದೆ. ಮಳೆಗಾಲದಲ್ಲಿ ತಾಪಿ ನದಿಯ ಪ್ರವಾಹದ ಭಯ ಈ ಕಣಿವೆಗೆ ಬಹುತೇಕ ಸಾಮಾನ್ಯ. ಈ ಜಿಲ್ಲೆಯ ಪರ್ವತಮಯ ಪ್ರದೇಶಗಳಲ್ಲಿ ಕಲ್ಲಿನಿಂದ ಕೂಡಿದ ಭೂಮಿಯೂ ಉಳಿದ ಕಡೆಗಳಲ್ಲಿ ಕಪ್ಪು - ಕೆಂಪು ಮಣ್ಣೂ ಇವೆ. ಜಿಲ್ಲೆಯ ಮುಖ್ಯ ಬೆಳೆಗಳು ಹತ್ತಿ, ಗೋಧಿ, ಸಜ್ಜೆ, ಜೋಳ ಮತ್ತು ನೆಲಗಡಲೆ. ನೀರಾವರಿ ಬೆಳೆಗಳಲ್ಲಿ ಮುಖ್ಯವಾದವು ಕಬ್ಬು ಮತ್ತು ಮೆಣಸಿನಕಾಯಿ. ಜಿಲ್ಲೆಯ ಅತ್ಯಂತ ದೊಡ್ಡ ಹತ್ತಿ ವ್ಯಾಪಾರ ಸ್ಥಳ ಧುಲಿಯಾ ನಗರ. ಅಲ್ಲಿ ಹತ್ತಿಯ ನಿಯಂತ್ರಿತ ಮಾರುಕಟ್ಟೆಯಿದೆ. ಸಿಂಡ್‍ಖೇಡಾ ತಾಲ್ಲೂಕಿನ ದೋಂಡಾಯಿಚೆಯಲ್ಲಿ ಇನ್ನೊಂದು ನಿಯಂತ್ರಿತ ಹತ್ತಿ ಮಾರುಕಟ್ಟೆಯುಂಟು. ಜಿಲ್ಲೆಯಲ್ಲಿ ಹಲವು ಹತ್ತಿ ಹಿಂಜುವ ಮತ್ತು ಜವಳಿಯ ಗಿರಣಿಗಳಿವೆ. ಸೇಂಗಾ ಎಣ್ಣೆಯ ತಯಾರಿಕೆಯಲ್ಲಿ ಜಿಲ್ಲೆಯ ಪ್ರಾಮುಖ್ಯ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಸುಮಾರು 42 ಎಣ್ಣೆ ಗಿರಣಿಗಳಿವೆ. ಇವುಗಳ ಪೈಕಿ ಸುಮಾರು 14 ಧುಲಿಯಾ ನಗರದಲ್ಲೇ ಇವೆ. ಜಿಲ್ಲೆಯಲ್ಲಿ ಹಲವು ಮರ ಕೊಯ್ಯುವ ಕಾರ್ಖಾನೆಗಳೂ ಉಂಟು. ಕೃಷಿ ಉತ್ಪನ್ನದ ಬಹುಭಾಗ ಮುಂಬಯಿಗೆ ಹಡಗಿನ ಮೂಲಕ ಸಾಗುತ್ತದೆ

ಈ ಜಿಲ್ಲೆಯಲ್ಲಿ ತಾಪಿ ನದಿಯ ಉತ್ತರಕ್ಕಿಂತ ಪ್ರದೇಶದಲ್ಲಿ ಬಹುಜನ ಗುಜರಾತಿ ಮಾತಾಡುತ್ತಾರೆ. ತಾಪಿಯ ದಕ್ಷಿಣ ಭಾಗದ ಜನ ಮರಾಠಿಯನ್ನೂ ಖಾನ್ ದೇಶೀ ಮತ್ತು ಅಹಿರಾಣಿ ಉಪಭಾಷೆಗಳನ್ನೂ ಆಡುತ್ತಾರೆ. ಪರ್ವತಮಯ ಪ್ರದೇಶದ ಕುಣಬೀ ಜನಾಂಗ ಇನ್ನೂ ತನ್ನ ಹಳೆಯ ಪರಂಪರೆಗಳನ್ನು ಕಾಯ್ದುಕೊಂಡಿದೆ.

ಜಿಲ್ಲೆಯ ಬೆಟ್ಟಸೀಮೆ ಅರಣ್ಯಮಯವಾದ್ದು. ಸಾತ್ಪುರ ಶ್ರೇಣಿಯಲ್ಲಿರುವ ತೋರಣಮಲ್ ಒಂದು ಗಿರಿಧಾಮ. ಇದು ಸಮುದ್ರಮಟ್ಟದಿಂದ 4,200 ಅಡಿ ಎತ್ತರದಲ್ಲಿದೆ. 							(ಬಿ.ಎ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ